ಕಣಾದ:

ಕನ್ನಡ ಸಾಂಸ್ಕೃತಿಕ ಸಂಘವು 1975ನೇ ಇಸವಿಯಿಂದ ಸತತವಾಗಿ “ಕಣಾದ” ಕನ್ನಡ ವಾರ್ಷಿಕ ವಿಜ್ಞಾನ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಇದನ್ನು ಪ್ರತಿವರ್ಷವೂ ಕರ್ನಾಟಕ ರಾಜ್ಯೋತ್ಸವದಂದು ಬಿಡುಗಡೆ ಮಾಡಲಾಗುತ್ತದೆ. ಪ್ರತಿವರ್ಷವೂ ಪತ್ರಿಕೆಯಲ್ಲಿ ರಾವೈಪ್ರ ವಿಜ್ಞಾನಿಗಳು ತಮ್ಮ ಸಂಶೋಧನಾ ಲೇಖನಗಳನ್ನು ಕನ್ನಡದಲ್ಲಿ ಬರೆದು, ಜನಸಾಮಾನ್ಯರಿಗೆ ತಮ್ಮ ಸಂಶೋಧನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅತ್ಯಂತ ಯಶಸ್ವಿಯಾಗುತ್ತಿದ್ದಾರೆ. ಈ ಲೇಖನಗಳನ್ನು ಹೊರತುಪಡಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯಲು ಪ್ರೋತ್ಸಾಹಿಸಬೇಕೆಂಬುದು “ಕಣಾದ” ಪ್ರಕಟಣೆಯ ಮತ್ತೊಂದು ಮೂಲಭೂತ ಉದ್ದೇಶ. ಇದಕ್ಕೆ ಪೂರಕವಾಗಿ ಪ್ರತಿವರ್ಷವೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಒಂದು ವಿಜ್ಞಾನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ, ಆಯ್ಕೆಯಾದ ಲೇಖನಗಳಿಗೆ ಬಹುಮಾನಗಳ ವಿತರಣೆ ಹಾಗೂ ಆ ಲೇಖನಗಳನ್ನು “ಕಣಾದ” ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಬಂದಿದೆ. ಪ್ರತಿವರ್ಷವೂ ಈ ಸ್ಪರ್ಧೆಗೆ ಸಾರ್ವಜನಿಕರಿಂದ ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದೇ ಇದಕ್ಕೆ ನಿದರ್ಶನ. ಕಣಾದದಲ್ಲಿ ಪ್ರಕಟವಾಗುವ ಲೇಖನಗಳ ಮತ್ತೊಂದು ವಿಶಿಷ್ಟವೆಂದರೆ, ಆಹ್ವಾನಿತ ಲೇಖನಗಳು. ಡಾ|| ನಾ.ಸೋಮೇಶ್ವರ, ಎ. ಪಿ. ರಾಧಾಕೃಷ್ಣ, ಡಾ|| ಬಿ.ಎಸ್.ಶೈಲಜ ಮುಂತಾದ ಕನ್ನಡದ ಪ್ರಸಿದ್ಧ ವಿಜ್ಞಾನ ಲೇಖಕರು ತಮ್ಮ ಅಮೂಲ್ಯ ಲೇಖನಗಳನ್ನು ಕಣಾದಕ್ಕೆ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಆಹ್ವಾನಿತ ಲೇಖನಗಳು ಕಣಾದದ ಹಿರಿಮೆಯನ್ನು ಹೆಚ್ಚಿಸಿವೆ ಎಂದರೆ ತಪ್ಪಾಗಲಾರದು. ಕಣಾದ ಪತ್ರಿಕೆಯನ್ನು ಕರ್ನಾಟಕದ ಹಲವಾರು ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವ್ಯಕ್ತಿಗಳು ಬಿಡುಗಡೆ ಮಾಡಿದ್ದಾರೆಂಬುದು ಒಂದು ಹೆಮ್ಮೆಯ ವಿಷಯ.

ಈ ಪತ್ರಿಕೆಯನ್ನು ಪ್ರತಿವರ್ಷವೂ ಕರ್ನಾಟಕದ 500 ಶಾಲೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುತ್ತಿದೆ.

ಕಣಾದದ ವಾರ್ಷಿಕ ಸಂಚಿಕೆಯನ್ನು ಏಕೆ ಆ ಹೆಸರಿನಿಂದ ಕರೆಯಲಾಗಿದೆ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಕೊಡಲಾಗಿದೆ. ಕಣಾದನು ಭರತ ವರ್ಷದ ಪ್ರಾಚೀನ ಮಹರ್ಷಿ. ಆತ ಸುಮಾರು ಕ್ರಿ.ಪೂ. 100 ರಿಂದ ಕ್ರಿ.ಶ. 100ರ ಅವಧಿಯಲ್ಲಿ ಜೀವಿಸಿದ್ದನೆಂದು ವಿದ್ವಾಂಸರ ಮತ. ‘ಕಾಣಾದಂ ಪಾಣಿನೀಯಂಚ ಸರ್ವಶಾಸ್ತೋಪಕಾರಕಂ’ ಎಂಬ ಸೂಕ್ತಿಯಂತೆ ಈ ಮಹಾಪುರುಷನು ಪಾಣಿನಿಯಂತೆಯೇ ಸೂತ್ರಕಾರ. ಈ ಋಷಿಯ ವೈಶೇಷಿಕವೆಂಬ ದರ್ಶನ ಗ್ರಂಥವು ಪದಾರ್ಥ ಮತ್ತು ಪ್ರಕೃತಿಕಗಳ ಸಂಬಂಧಗಳನ್ನು ವಿಶ್ಲೇಷಿಸುವ ಅನೇಕ ಸೂತ್ರಗಳನ್ನು ಒಳಗೊಂಡಿದೆ. ವಸ್ತುಗಳ ಸೂಕ್ಷ್ಮಾತಿಸೂಕ್ಷ್ಮ ಭಾಗಗಳನ್ನು ಅಣು-ಪರಮಾಣುಗಳೆಂಬ ಹೆಸರಿನಿಂದ ಕರೆದು, ಅಗ್ನಿಯ ಸಂಬಂಧದಿಂದ ಇವುಗಳಲ್ಲಿ ಸಂಯೋಜನೆ-ವಿಭಜನೆಗಳಾಗುತ್ತವೆಯೆಂದು ಸೂಚಿಸಿ ಕಣಾದನು ಅಣು ವಿಜ್ಞಾನಕ್ಕೆ ಆದ್ಯ ಪ್ರವರ್ತಕ ಎನಿಸಿಕೊಂಡಿದ್ದಾನೆ. ವಸ್ತುಗಳಲ್ಲಿನ ಚಲನೆ, ಆಕರ್ಷಣೆ ಮತ್ತು ವಿಕರ್ಷಣೆ ಇವೇ ಮುಂತಾದ ಕ್ರಿಯೆಗಳು ಮತ್ತು ವಸ್ತುಗಳ ಮೇಲೆ ಶಾಖ, ಶಬ್ದ, ವಿದ್ಯುಚ್ಛಕ್ತಿ, ಕಾಂತಶಕ್ತಿ ಮುಂತಾದವುಗಳ ಪರಿಣಾಮಗಳನ್ನೂ ಸಹ ಕಣಾದನು ವೈಶೇಷಿಕ ಸೂತ್ರಗಳಲ್ಲಿ ನಿರೂಪಿಸಿದ್ದಾನೆ. ಹೀಗೆ ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆಯೇ ಅಣುತತ್ತ್ವವನ್ನು ಪ್ರತಿಪಾದಿಸಿ, ಕಣಾದನು ಭಾರತದ ಪ್ರಾಚೀನ ವಿಜ್ಞಾನಿಯಾಗಿದ್ದಾನೆ. ಈತನ ಹೆಸರು ಚಿರಸ್ಮರಣೀಯ. ಆದುದರಿಂದ ಕೇವಲ ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ಪತ್ರಿಕೆಗೆ ‘ಕಣಾದ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

ರಾ. ವೈ. ಪ್ರಾ - ಕನ್ನಡ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರಕಟಣೆಗೊಂಡ ಕಣಾದ ಸಂಚಿಕೆಗಳು


 

ರಾ ವೈ ಪ್ರನ ನಿರ್ದೇಶಕರ ವರದಿ ರೂಪಾಂತರ:

ಸಂಘವು ಕಣಾದ ಪ್ರಕಟಣೆಯ ಜೊತೆಗೆ ಪ್ರತಿವರ್ಷವೂ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ನಿರ್ದೇಶಕರ ವರದಿಯ ಕನ್ನಡ ರೂಪಾಂತರವನ್ನು ಹೊರತರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

 


ಕನ್ನಡ ಸಾಂಸ್ಕೃತಿಕ ಸಂಘ(ರಿ)
ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ – ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು
(CSIR-NAL)
ಹಳೆ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು – 560 017
ದೂರವಾಣಿ – 080 2505 1978/ 25051624/ 2508 6662